ಅಮಲ ಭಾರತಂ ಕ್ಯಾಂಪೇನ್ (ABC)
ನಮ್ಮ ದೇಶದ ಸಾರ್ವಜನಿಕ ಸ್ಥಳಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಶುಚಿಗೊಳಿಸುವ ಗುರಿ ಹೊಂದಿರುವ ಈ ಯೋಜನೆ, ಸ್ವಚ್ಛತೆಯ ಮೂಲಕ ನಮ್ಮ ಸುಂದರ ನಿಸರ್ಗ ಹಾಗೂ ಭೂಮಿಯ ಕುರಿತಾದ ಮಾನವತೆಯ ಋಣದ ಬಗ್ಗೆ ಸಾಮಾಜಿಕ ಅರಿವನ್ನು ಮೂಡಿಸುವ ಅಭಿಲಾಷೆಯನ್ನು ಹೊಂದಿದೆ. ಸೆಪ್ಟಂಬರ್ 27, 2010ರಂದಿನ ತನ್ನ 57ನೆಯ ಜನ್ಮ ದಿನೋತ್ಸವದಂದು, ಅಮ್ಮ ಈ ಯೋಜನೆಯನ್ನುಜಾರಿಗೆ ತಂದರು. ಇದು ಅಮ್ಮನ ತನ್ನ ಜನ್ಮ ದಿನೋತ್ಸವದ ಆಶಯವಾಗಿದೆ. ಮಾತಾ ಅಮೃತಾನಂದಮಯಿ ಮಠ (ಮಾ.ಅ.ಮ.)ವು ರಾಜ್ಯ ಸರಕಾರಗಳ ಹಾಗೂ ಇನ್ನಿತರ ಸಂಸ್ಥೆಗಳ ಬೆಂಬಲ ಹಾಗೂ ಸಹಕಾರ ಸಿಕ್ಕಿದಲ್ಲಿ ಸರಕಾರಿ ಶಾಲೆಗಳಲ್ಲಿ ಹಾಗೂ ಭಾರತದಾದ್ಯಂತ ರಸ್ತೆಗಳ ಬದಿಯಲ್ಲಿ ಶೌಚಾಲಯ ಕಟ್ಟಿಸುವ ಹಾಗೂ ಕಸದ ಪೆಟ್ಟಿಗೆ ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸುವುದೆಂದು ಅಮ್ಮ ಹೇಳಿದ್ದಾರೆ.
ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿಡುತ್ತೇವೆಂಬ ಪಣತೊಡಬೇಕೆಂದು ಅಮ್ಮ ಬಯಸುತ್ತಾರೆ. ಜನತೆ, ಸರಕಾರ ಹಾಗೂ ಇನ್ನಿತರ ಸಂಸ್ಥೆಗಳು ಒಟ್ಟುಗೂಡಿದರೆ ನಿಶ್ಚಯವಾಗಿಯೂ ಈ ಪವಿತ್ರ ಪರಿಶ್ರಮವು ಫಲವೀಯುವುದೆಂದು ಅಮ್ಮ ಭಾವಿಸುತ್ತಾರೆ.
ಈ ಯೋಜನೆಯು ಮೊದಲು ಕೇರಳದಲ್ಲಿ ಆರಂಭವಾಗಿ ತದನಂತರ ಭಾರತದ ಇನ್ನಿತರ ರಾಜ್ಯಗಳಿಗೂ ಹರಡುತ್ತದೆ.
ಅಮಲ ಭಾರತಂ ಕ್ಯಾಂಪೇನ್‍ನ ಧ್ಯೇಯ
1. ಭಾರತದ ಶುಚೀಕರಣ, ನಿರ್ಮಲತೆಯಿಂದ ಆರೋಗ್ಯ, ಕಸಕಡ್ಡಿಗಳ ವಿಂಗಡಣೆ ಹಾಗೂ ಅವುಗಳ ಉಚಿತರೀತಿಯಲ್ಲಿ ವಿಸರ್ಜನೆಯ ಕಾರ್ಯಾಚರಣೆಯ ವಿಧಾನಗಳನ್ನು ಹಮ್ಮಿಕೊಳ್ಳುವುದು.
2. ಜನರು ಪರಿಸರ ನೈರ್ಮಲ್ಯದ ಅವಶ್ಯಕತೆಯ ಬಗ್ಗೆ ಹೆಚ್ಚಿನ ಅರಿವನ್ನು ಬೆಳೆಸುವಂತೆ ಮಾಡುವುದು.
ಸ್ವಚ್ಛತೆಯನ್ನು ಕಾಪಾಡುತ್ತಾ, ಆರೋಗ್ಯವನ್ನು ರಕ್ಷಿಸಿಕೊಳ್ಳುವುದು, ಪ್ರತಿಯೊಬ್ಬ ಭಾರತೀಯನಿಗೆ ತನ್ನ ತಾಯ್ನಾಡಿನ ಪ್ರತಿಯಾಗಿರುವ ಕರ್ತವ್ಯವಲ್ಲದೆ; ನರನ ಹಾಗೂ ನಿಸರ್ಗದ ಸಮನ್ವಯತೆಗೆ ಅವಶ್ಯವೂ ಹೌದು; ಹಾಗೂ ಮುಂಬರಲಿರುವ ಪೀಳಿಗೆಗಳಿಗೆ ತಾನು ತಪ್ಪಿಸಿಕೊಳ್ಳಲಾಗದ ಹೊಣೆಯೂ ಹೌದು. ಇದು ಪ್ರತಿಯೊಬ್ಬ ಮಾನವನ ವೈಯಕ್ತಿಕ ಧರ್ಮವೂ ಹೌದು, ಕರ್ತವ್ಯವೂ ಹೌದು. ಪರಿಸರ ನಿರ್ಮಲತೆ ಹಾಗೂ ಸಾಮಾಜಿಕ ಆರೋಗ್ಯಗಳಿಗಾಗಿರುವ ಈ ಬೃಹದ್‌ಪ್ರಯತ್ನಗಳ ಮುಖಾಂತರ ಮಾತಾ ಅಮೃತಾನಂದಮಯಿ ಮಠ (ಮಾ.ಅ.ಮ.)ವು ನಿರ್ಮಲ ಭಾರತ ನಿರ್ಮಾಣದ ಗುರಿಯನ್ನು ಹೊಂದಿದೆ.
ಪ್ರತಿ ಎರಡು ಕಿಲೊಮೀಟರಿಗೆ ಒಂದರಂತೆ ಭಕ್ತರು ಕಮಿಟಿ ಸ್ಥಾಪಿಸಿ ತಮ್ಮ ಸುತ್ತಲಿನ ಪರಿಸರ ಶುಚೀಕರಣದ ಜವಾಬ್ದಾರಿ ವಹಿಸಬೇಕೆಂಬುದು ತನ್ನ ಇಚ್ಛೆ ಎಂದು ಅಮ್ಮ ಹೇಳಿದರು. ಅಲ್ಲದೆ, “ಇಂಥ ಕಮಿಟಿಗಳ ಸರಮಾಲೆ ನಿಜವಾಗಲೂ ಒಂದು ಬೃಹತ್ ಪರಿವರ್ತನೆಯನ್ನು ತರಲು ಸಾಧ್ಯ” ಎಂದು ಹೇಳಿದರು. “ಈ ಕಮಿಟಿಗಳು ತಮ್ಮ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಕಸದ ಡಬ್ಬಿಗಳು ಮತ್ತು ಕಸ ಎಲ್ಲೆಂದರಲ್ಲಿ ರಸ್ತಯಲ್ಲಿ ಬಿಸಾಡಬಾರದೆಂದೂ, ಉಗುಳಬಾರದೆಂದೂ ಬರೆದಿರುವ ಫಲಕಗಳು ಅಲ್ಲಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕು. ಕಸವನ್ನು (ವೇಸ್ಟ್) ಸಮಯಕ್ಕೆ ಸರಿಯಾಗಿ ಸಂಗ್ರಹಿಸಿ ಉಚಿತರೀತಿಯಲ್ಲಿ ಸಂಸ್ಕರಿಸಬೇಕು.” ಇನ್ನೂ ಮುಂದಕ್ಕೆ ಹೋಗಿ, ಉಗುಳುವಾಗ ಉಪಯೋಗಿಸಲಿಕ್ಕಾಗಿ ಶಾಲಾ ಮಕ್ಕಳಿಗೆ ಮರುಪಯೋಗಿಸಲಾಗುವಂಥ ಹತ್ತು ಲಕ್ಷ ಕರವಸ್ತ್ರಗಳನ್ನು ನೀಡುವುದಾಗಿ ಹೇಳಿದ ಅಮ್ಮ, ಅವರು ಅದನ್ನು ಉಗುಳಲು ಉಪಯೋಗಿಸಬೇಕು; ಇದರಿಂದ ರೋಗಗಳ ಹರಡುವಿಕೆಯನ್ನು ತಡೆಗಟ್ಟಬಹುದೆಂದು ಹೇಳಿದರು.