ಅಮ್ಮ ಏನು ಹೇಳುತ್ತಾರೆ

“ಭಾರತ ಬೆಳೆಯುತ್ತಿದೆ; ಭಾರತ ಮುನ್ನಡೆಯುತ್ತಿದೆ ಎಂದು ಹೇಳುತ್ತಾರೆ. ಆದರೆ ಪರಿಸರ ಸ್ವಚ್ಛತೆ ಹಾಗೂ ಆರೋಗ್ಯಕರ ಜೀವನಶೈಲಿಯಲ್ಲಿ ನಾವು ಶತಮಾನಗಳಷ್ಟು ಹಿಂದಿದ್ದೇವೆ. ನಮ್ಮ ರಸ್ತೆಗಳು ಮತ್ತು ಸಾರ್ವಜನಿಕ ಶೌಚಾಲಯಗಳು ಹಾಗೂ ಸ್ನಾನಗೃಹಗಳಲ್ಲಿ ಸ್ವಚ್ಛತೆ ಇಲ್ಲದಿರುವುದೇ ಇದಕ್ಕೆ ಸಾಕ್ಷಿ.”

“ಇಂದು ಭಾರತ ಒಂದು ಅಣು ರಾಷ್ಟ್ರವಾಗಿದೆ. ಭಾರತವು ವೈಜ್ಞಾನಿಕವಾಗಿಯೂ ಆರ್ಥಿಕವಾಗಿಯೂ ಮುನ್ನಡೆಯುತ್ತಿದೆ. ಎಷ್ಟೊ ವರದಿಗಳು ಹೇಳುವ ಪ್ರಕಾರ, 2025ರೊಳಗೆ ಭಾರತವು ಜಗತ್ತಿನಲ್ಲಿ ಮೂರನೆಯ ಅತಿ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲಿದೆ. ಆದರೆ ಸ್ವಚ್ಛತೆಯ ಮಟ್ಟಿಗೆ, ನಾವು ಇನ್ನೂ ಚಾಪೆಯಲ್ಲೇ ಉಚ್ಚೆಹೊಯ್ಯುವ ಹಂತದಲ್ಲಿದ್ದೇವೆ.”

“ಪಾಶ್ಚಾತ್ಯ ದೇಶಗಳು ರಸ್ತೆ, ಸಾರ್ವಜನಿಕ ಸ್ಥಳಗಳು ಹಾಗೂ ಸಾರ್ವಜನಿಕ ಸ್ನಾನಗೃಹ ಹಾಗೂ ಶೌಚಾಲಯಗಳಲ್ಲಿ ಸ್ವಚ್ಛತೆಯಲ್ಲಿ ಉನ್ನತ ಮಟ್ಟವನ್ನು ಕಾಯ್ದುಕೊಂಡು ಬರುತ್ತಿವೆ. ಅದಕ್ಕೆ ಹೋಲಿಸಿದರೆ, ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಭಾರತದ ಶುಚಿತ್ವ ಶೋಚನೀಯ ಸ್ಥಿತಿಯಲ್ಲಿದೆ.”

“ರಸ್ತೆಬದಿಯಲ್ಲಿ ಮೂತ್ರಮಾಡುವುದು ಮತ್ತು ಸಾರ್ವಜನಿಕ ರಸ್ತೆಗಳಲ್ಲಿಯೂ, ರಸ್ತೆ ಪಕ್ಕದ ಕಾಲುದಾರಿಯಲ್ಲಿ ಉಗುಳುವುದೂ ಜನರಿಗೆ ಅಭ್ಯಾಸವಾಗಿ ಬಿಟ್ಟಿದೆ. ಕಸದ ಡಬ್ಬಿಗಳಿಟ್ಟಿದ್ದರೂ ಅದರಲ್ಲಿ ಕಸ ಮುಸುರೆ ಹಾಕುವ ಅಭ್ಯಾಸ ಬೆಳೆಸಿಕೊಂಡಿಲ್ಲ; ಅದನ್ನು ರಸ್ತೆ ಬದಿಯಲ್ಲಿ, ಬೇಕಾದರೆ ರಸ್ತೆ ಮಧ್ಯದಲ್ಲೇ ಎಸೆದು ಹೋಗುತ್ತಾರೆ.”

“ಪರಿಸರ ನಿರ್ಮಲತೆ ಹಾಗೂ ಆರೋಗ್ಯಕರ ಜೀವನ ಶೈಲಿ ನಮ್ಮ ಪ್ರಗತಿಯ ಹಾಗೂ ಪರಿಷ್ಕೃತ ಸಂಸ್ಕೃತಿಯ ದ್ಯೋತಕವಾಗಿದೆ. ಇದು ನಿಜವಾಗಬೇಕಾಗಿದ್ದಲ್ಲಿ, ಜನರಲ್ಲಿ ಅರಿವು ವೃದ್ಧಿಸುವ ಕಾರ್ಯವಿಧಾನಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ನಾವು ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ಸ್ಟಾಪ್‌ಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಸಾರ್ವಜನಿಕ ಸ್ವಚ್ಛತೆಯ ಕುರಿತಾದ ಸಾಕಷ್ಟು ಫಲಕಗಳನ್ನು ಇಡಬೇಕು.”

“ಇನ್ನೆಂದೂ ನಮ್ಮ ಸ್ವಚ್ಛತೆಯ ಕೊರತೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನ ಭಂಗಕ್ಕೆ ಕಾರಣವಾಗಬಾರದು. ನಮ್ಮ ಮನೆ, ಪರಿಸರ ಹಾಗೂ ಸಾರ್ವಜನಿಕ ಸ್ಥಳಗಳನ್ನು ನಿರ್ಮಲವಾಗಿಡುವುದನ್ನು ನಮ್ಮ ಪವಿತ್ರ ಕರ್ತವ್ಯವಾಗಿ ಪರಿಗಣಿಸಬೇಕು.”

“ನಾವು ಉಂಡು ಮಲಗುವಂತೆಯೇ ನಮ ಪರಿಸರವನ್ನು ನಿರ್ಮಲವಾಗಿಡುವುದೂ ನಮ್ಮ ಜೀವನದ ಅಂಗವಾಗಬೇಕು.”

“ನಮ್ಮ ದೇಹವನ್ನು ಶುಚಿಯಾಗಿಡಲು ಪ್ರತಿನಿತ್ಯ ಸ್ನಾನ ಮಾಡುವಂತೆ, ಸುಗಂಧ ದ್ರವ್ಯ (ಪರ್‌ಫ್ಯೂಂ) ಹಚ್ಚುವಂತೆ, ನಮ್ಮ ರಸ್ತೆಗಳ ಹಾಗೂ ಸಾರ್ವಜನಿಕ ಸ್ಥಳಗಳ ಶುಚಿತ್ವವನ್ನು ಕಾಯ್ದುಕೊಳ್ಳುವುದನ್ನು ಖಂಡಿತವಾಗಿಯೂ ಮಾಡಬೇಕು. ಇವು ನಮ್ಮ ದೇಶದ ಶರೀರದ ಭಾಗಗಳೇ ಆಗಿವೆ.”

“ಪ್ರವಾಸಿಗಳನ್ನು ಸಾಮಾನ್ಯವಾಗಿ ಚೆಲುವೆಯರು ಸ್ವಾಗತಿಸುತ್ತಾರೆ. ಆದರೆ ಈ ಪ್ರವಾಸಿಗಳು ಹೊರಗೆ ಹೋದಾಗ ನಮ್ಮ ತಾಯ್ನಾಡಲ್ಲಿ ಕಾಣುವುದು ಒಂದು ಕೊಳಕು ದೇಶವನ್ನು. ಯಥಾರ್ಥದಲ್ಲಿ ಅವರು ಬಂದಿರುವುದು ಸುಂದರ ಭಾರತವನ್ನು ನೋಡಲು; ಆದರೆ ನಮಗಿದರ ಅರಿವಿಲ್ಲ. ಇವತ್ತು ನಮ್ಮ ಸುಂದರ ಭಾರತವು ಕುಷ್ಟ ರೋಗಿಯಂತಾಗಿದೆ. ಈ ತಾಯಿಗೆ ಪರಿಶುದ್ಧತೆ, ಸೌಂದರ್ಯ ಮತ್ತು ಅರೋಗ್ಯವನ್ನು ಮರಳಿಸುವುದು ನಮ್ಮ ಮೊದಲ ಪ್ರಯತ್ನವಾಗಬೇಕು.”

Leave a Reply